ಪದ್ಮನಾಭ 1 -
	1680. ಜೈನಕವಿ. ಪದ್ಮಾವತೀಚರಿತೆಯ ಕರ್ತೃ. ಕವಿ ತಾನು ತುಳುವ ದೇಶದ ಚೂಲಿಕಾ ಪಟ್ಟಣದ ಅರಸು ತಿರುಮಲ ಸಾಮಂತನಲ್ಲಿ ಕೋಶಾಧ್ಯಕ್ಷನಾಗಿದ್ದುದಾಗಿ ಹೇಳಿಕೊಂಡು ಆತನ ಪರಾಕ್ರಮ ದಯಾಪರತೆ ಧರ್ಮಾಸಕ್ತಿಗಳನ್ನು ಕಾವ್ಯದಲ್ಲಿ ಹೊಗಳಿದ್ದಾನೆ. ಕವಿ ತನ್ನ ವಿಚಾರವಾಗಿ ಇನ್ನು ಏನನ್ನೂ ಹೇಳಿಕೊಂಡಿಲ್ಲ.

	ತನ್ನ ಈ ಕೃತಿಯನ್ನು ಕವಿ ಜಿನದತ್ತರಾಯ ಚರಿತೆ, ಅಮ್ಮನವರ ಚರಿತೆ ಎಂಬುದಾಗಿಯೂ ಅಲ್ಲಲ್ಲಿ ಹೆಸರಿಸಿದ್ದಾನೆ. ಸಾಂಗತ್ಯ ಛಂದದಲ್ಲಿರುವ ಈ ಕೃತಿಯಲ್ಲಿ 12 ಸಂಧಿಗಳೂ 1,600 ಪದ್ಯಗಳೂ ಇವೆ. ಇದರಲ್ಲಿ 23ನೆಯ ತೀರ್ಥಂಕರ ಪಾಶ್ರ್ವನಾಥನ ಶಾಸನದೇವಿಯಾದ ಪದ್ಮಾವತಿಯ ಚರಿತೆಯಿದೆ.

	ಕವಿ ತನ್ನ ಕೃತಿಯ ಆದಿಯಲ್ಲಿ ಪ್ರಾಸಭಾವಗಳ ಬಗೆಗೆ ತನಗೇನೂ ತಿಳಿದಿಲ್ಲವೆಂದು ಹೇಳಿರುವುದು ವಿನಯಕ್ಕಾಗಿ ಮಾತ್ರ. ಕಾವ್ಯದುದ್ದಕ್ಕೂ ಪ್ರಾಸದ ವಿಲಾಸವಿದೆ. ಹಾಡುತ್ತ ಹೋದಂತೆ ಭಾವಪರವಶತೆಯೂ ಉಂಟಾಗುತ್ತದೆ. ಕೆಡುವಾಗ ಬುದ್ಧಿ ಕಿವಿಗೆ ಕೇಳದು, ಪರಸೇವೆ ಕರಕಷ್ಟ, ಮೆಚ್ಚಿದವಗೆ ಮಸಣಸುಖ-ಎಂಬಲ್ಲಿ ಕವಿಯ ಲೋಕಜ್ಞಾನದ ಪರಿಚಯವಾಗುತ್ತದೆ. ರಾಜನೊಡನೆ ಬಂದ ಪುಳಿಂದಿಯನ್ನು ಕಂಡ ಪುರಜನರು ನೀವು ಕಂಡಿರ ಕಾಗೆ ವರ್ಣದ ಪುಳಿಂದಿಯನೂ ಎಂದು ಹೇಳುವಾಗ ಸಹಜತೆಯ ಸೌಂದರ್ಯವಿದೆ. ಪುಷ್ಪಗಳನ್ನು ಅಳಿಗಳಿಗೂ ಹಣ್ಣುಗಳನ್ನು ಗಿಳಿಗಳಿಗೂ ತಳಿರನ್ನು ಕೋಗಿಲೆಗಳಿಗೂ ಕೊಟ್ಟ ಮಾಮರ ಹಲವು ಮಕ್ಕಳ ತಾಯಿಯಂತೆ ಕವಿಯ ಕಣ್ಣಿಗೆ ಕಂಡಿದೆ. ಜೈನಕಾವ್ಯವಾದರೂ ಭವಾವಳಿಯ ತೊಡರಿಲ್ಲದೆ ಎಲ್ಲರಿಂದಲೂ ಓದಿಸಿಕೊಳ್ಳವ ಸರಳ ಸುಂದರ ಕಾವ್ಯವಿದು.										(ಎಂ.ಆರ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ